ಪ್ಲಾಸ್ಟರ್ ಆಫ್ ಪ್ಯಾರಿಸ್

ಜಿಪ್ಸಮ್ ಎಂದೂ ಕರೆಯುತ್ತಾರೆ. ಮೊತ್ತಮೊದಲಾಗಿ ಪ್ಯಾರಿಸ್ಸಿನಲ್ಲಿ ಇಂದಿನ ಸಿಮೆಂಟಿನಂತೆ ಗಿಲಾವು ಮಾಡಲು ಪ್ರಯೋಗಿಸಿದ್ದರಿಂದ ಪ್ಲಾಸ್ಟರ್ ಅಫ್ ಪ್ಯಾರಿಸ್ ಎಂದು ಹೆಸರಾಯಿತು. ಇದು ನೀರಿನ ಅಂಶವಿಲ್ಲದ ಕ್ಯಾಲ್ಸಿಯಮ್ ಸಲ್ಛೇಟ್. ಇದನ್ನು ತೇವಗೊಳಿಸಿ ಆರಿಸಿ ತಯಾರಿಸಿದ ಅಚ್ಚು ಮತ್ತು ದಬ್ಬೆ, ಮುರಿದ ಮೂಳೆ ಮತ್ತು ತಪ್ಪಿದ ಕೀಲನ್ನು ಸರಿಯಾಗಿ ಜೋಡಿಸಿ ಅಚಲಗೊಳಿಸಲು ತುಂಬ ಸಹಾಯಕಗಳು. ಅ ಪ್ರದೇಶಕ್ಕೆ ವಿಶ್ರಾಂತಿ ಮತ್ತು ಆಧಾರವನ್ನು ಒದಗಿಸಿಕೊಟ್ಟು ಬೇಗ ಗುಣ ಹೊಂದಲು ಅವಕಾಶ ಮಾಡಿಕೊಡುತ್ತವೆ. ಪ್ಲಾಸ್ಟರ್ ಅಚ್ಚು ಗಾಯಗೊಂಡ ಪ್ರದೇಶದ ಆಚೆ ಈಚೆ ಒತ್ತು ಭಾರ ಹಾಕದೆ ಬಿಗಿಯಾಗಿ ಕಚ್ಚಿ ಹಿಡಿದುಕೊಳ್ಳಬೇಕು. ಅದು ಒಡೆಯದಂತೆ ಭದ್ರವಾಗಿದ್ದು ರಕ್ತಪರಿಚಲನೆಗೆ ತಡೆಯನ್ನು ಉಂಟುಮಾಡಬಾರದು. ಬಲೆಗಣ್ಣು ಹೊಂದಿದ ತೆಳು ಮಸ್ಲಿನ್ ಅಥವಾ ಕ್ರಿನೊಲಿನ್ ಬ್ಯಾಂಡೇಜುಗಳ ಮೇಲೆ ತೆಳುವಾಗಿ (ಸುಮಾರು 1 ಮಿಮೀ) ದ್ರವರಹಿತ ಕ್ಯಾಲ್ಸಿಯಮ್ ಸಲ್ಛೇಟ್ ಪುಡಿಯನ್ನು ಉದುರಿಸಿ ಸುರುಳಿ ಸುತ್ತಿ ಅನಂತರ ಹೊರತೆಗೆದು ವಾಯು ಪ್ರಭಾವಕ್ಕೆ ಒಳಗಾಗದಂತೆ, ತನ್ಮೂಲಕ ನೀರಿನಂತೆ ಹೀರದಂತೆ ಮುಚ್ಚಿಡಬೇಕು. ಈ ಬ್ಯಾಂಡೇಜುಗಳು ಸಾಧಾರಣವಾಗಿ 105 ಮೀ ಉದ್ದ 5, 10 ಅಥವಾ 15 ಸೆಂಮೀ ಅಗಲವಾಗಿರುತ್ತವೆ. ಉಪಯೋಗಿಸುವ ಮುನ್ನ ಈ ಬ್ಯಾಂಡೇಜ್ ಸುರುಳಿಯನ್ನು ನೀರಿನಲ್ಲಿ ಮುಳುಗಿಸಿ ತೆಗೆದು ಸುಮಾರಾಗಿ ನೀರನ್ನು ಹಿಂಡಿ ಸುರುಳಿಯನ್ನು ಬಿಚ್ಚುತ್ತ ಒಂದರ ಮೇಲೊಂದು ಪದರ ಬರುವಂತೆ ದಬ್ಬೆಯ ರೂಪ ಕೊಡಲಾಗುತ್ತದೆ ಇಲ್ಲವೆ ಸುತ್ತುಪಟ್ಟಿಯಂತೆ ಗಾಯವಾದ ಭಾಗದ ಹಾಗೂ ಪ್ಲಾಸ್ಟರ್ ದಬ್ಬೆಯ ಸುತ್ತ ಸುತ್ತಲಾಗುತ್ತದೆ. ಮುರಿದ ಮೂಳೆಯನ್ನು ಜೋಡಿಸಿ, ಸಮರ್ಪಕ ಸ್ಥಿತಿಯಲ್ಲಿರಿಸಿ, ಬೇಕಾದ ಉದ್ದಕ್ಕೆ ಬ್ಯಾಂಡೇಜು ಪಟ್ಟಿಯ ದಬ್ಬೆಯನ್ನು ಅಡಿಪಾಯವಾಗಿ ಕೊಟ್ಟು, ಅನಂತರ ಬ್ಯಾಂಡೇಜು ಪಟ್ಟಿಗಳನ್ನು ಅಚ್ಚೊತ್ತಿದಂತೆ ಸುತ್ತಲಾಗುತ್ತದೆ. ಅಲ್ಲದೆ ಮೂಳೆಯ ಉಬ್ಬು ಪ್ರದೇಶದಲ್ಲಿ ಹತ್ತಿ ಬಟ್ಟೆಯ ತೆಳು ಪದರಿನ ಮೆತ್ತೆಯನ್ನು ಒಳಗೆ ಇರಿಸಲಾಗುತ್ತದೆ. ಪ್ಲಾಸ್ಟರ್ ಬ್ಯಾಂಡೇಜಿನ ಮೇಲೆ ಪ್ಲಾಸ್ಟರ್ ಕೆನೆಯನ್ನು ಸವರಲಾಗುತ್ತದೆ. 8-19 ಮಿನಿಟುಗಳಲ್ಲಿ ಪ್ಲಾಸ್ಟರ್ ಭದ್ರವಾಗುತ್ತದೆ. ಪ್ಲಾಸ್ಟರುಗಳನ್ನು ಮೊಳಕ್ಕೆ ಅಥವಾ ಕಂಕುಳಿನ ಕೆಳಗಿನಿಂದ ಅಂಗೈವರೆಗೆ, ಮಂಡಿ ಅಥವಾ ತೊಡೆಯ ಮೇಲ್ಭಾಗದಿಂದ ಕಾಲ್ಬೆರಳವರೆಗೆ ಹಾಕಲಾಗುತ್ತದೆ. ಅವು ಕೆಲವು ಬಾರಿ ಮುಂಡ, ಭುಜ ಅಥವಾ ಸೊಂಟವನ್ನು ಒಳಗೊಂಡಿರುತ್ತವೆ. ಬೇರೆ ಬೇರೆ ಸ್ಥಳದ ಮುರಿತವನ್ನು ಅವಲಂಬಿಸಿ, ಪ್ಲಾಸ್ಟರನ್ನು 4ರಿಂದ 14 ವಾರಗಳ ಪರ್ಯಂತ ಇರಿಸಬೇಕಾಗುತ್ತದೆ. ಕೆಲವು ಬಾರಿ ಪ್ಲಾಸ್ಟರ್ ತುಂಬ ಬಿಗಿಯಾಗಿ ಇಲ್ಲವೆ ಅದರಡಿಯ ಪ್ರದೇಶದಲ್ಲಿ ಬಾವಾಗಿ ರಕ್ತ ಪರಿಚಲನೆಯನ್ನು ಇರುಕಿನಲ್ಲಿ ಸಿಗಿಸಬಹುದು ಇಲ್ಲವೆ ಮೂಳೆಯ ಉಬ್ಬು ಇರುವ ಕಡೆ ಒತ್ತುಗಾಯ, ನರದ ಮೇಲಣ ಒತ್ತು ಭಾರದಿಂದ ಶಕ್ತಿಹೀನತೆ ಉಂಟಾಗಬಹುದು. 
(ಪಿ.ಎಸ್.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ